Life Goes On...

Life Goes On...
Life--- The way u Look at it

Tuesday, October 28, 2014

ಭಾವತೀರಕೆ ಯಾನ!!!!



ತಿಳಿನೀಲಾಕಾಶವು ಕಪ್ಪಾಗಿ ತಯಾರಿರಲು ಇರುಳ ಅಚ್ಚರಿಗೆ
ದಿನಚರಿಯ ಮುಗಿಸಿ ಮಲಗಿರುವನು ಆ ರವಿಯು ಬೆಚ್ಚಗೆ
ಬಾಲ ಚಂದಿರನು ವಿರಾಜಿಸುತ್ತಿದ್ದನು ನಭದಲ್ಲಿ, ಮಾದರಿಯಾಗಿ ಚೆಲುವಿಗೆ

ಆ ನೀರವದ ಆತಂಕವ ಅಳಿಸಲು ತಂಗಾಳಿ ಆಲಾಪಿಸುತಿತ್ತು
ಕಡಲ ಸೇರುವ ಕಾತರದಲ್ಲಿ ಆ ನೀರ ಹನಿಗಳು ಕಾಲಕಿತ್ತಿದ್ದವು
ಅಗೋಚರ ಜೀವ ಕೋಟಿಯ ಅಸಂಬದ್ದ ಸಂವಾದದಲ್ಲಿ ತಲ್ಲೀನವಾಗಿತ್ತು

ಈ ಸುಂದರ ಸನ್ನಿವೇಶ ಮೂಡಿರಲು
ನದಿಯ ಪಕ್ಕದಲ್ಲಿ ನಾವು ಸಂಭಾಷಣಿಯಲ್ಲಿ ಮುಳುಗಿರಲು
ಆಗಾಗ ಕಂಡ ಅಚ್ಚರಿಗಳ ಬುತ್ತಿಯೇ ಈ ಕೆಳಗಿನ ಸಾಲುಗಳು

ಚಂದಿರನ ಮೀರಿಸುವಂತಿತ್ತು ಆ ಅಸಂಖ್ಯ ಚುಕ್ಕಿಗಳ ಹೊಳಪು
ನಾವೇನು ಕಮ್ಮಿ ಎನ್ನುವಂತಿತ್ತು ಮಿಂಚುಳ್ಳಿಗಳ ಮಿಂಚಿನ ಸೊಗಸು
ಆದರೆ ಅವುಗಳ ನಾಚಿಸುವಂತಿತ್ತು ಆಗಾಗ ಮಿಟುಕಿಸಲು ಅವಳ ಕಣ್ಣು

ಹಧ ಮೀರದೆ ತಂಗಾಳಿಯೊಟ್ಟಿಗೆ ತೂಗುತ್ತಿರುವ ಬಳಕುವ ಬಳ್ಳಿಗಳಂತೆ
ಮಧ ತೋರದೆ, ಇರುಳ ವಿಸ್ಮಯವ ತೋರಿಸುತ್ತಿರುವ ಆ ಮೋಡಗಳಂತೆ
ಸಂಭಾಷಣೆಯ ಲಯಕ್ಕೆ ತರುತಿದ್ದವು ಅವಳ ಸ್ಪುಟವಾದ ಮಾತುಗಳು

ಮೀನುಗಳು ಜಿಗಿದು ಮತ್ತೆ ನೀರಿಗೆ ಬಿದ್ದು, ಮೂಡಿಸುವ ಕ್ಷಣಿಕ ಗದ್ದಲದಂತೆ
ಕಲ್ಲು ಅಡ್ಡಾಗಿ ತಿಳಿನೀರ ಹರಿವಿನಲ್ಲಿ ಮೂಡುವ ಸ್ಠಾನಿಕ ಗಲಭೆಯಂತೆ
ಆಗಾಗ ಸಿಡಿದು ಓಮ್ಮೆಲೆ ತಣ್ಣಗಾಗುತಿತ್ತು ಅವಳ ಆ ತುಸು ಮುನಿಸು

ವಿಶಿಷ್ಟ ಕೆಲಸವಲ್ಲದಿದ್ದರು ಬಂದಂದು ಮುದ್ದು ಮುಖವ ತೋರುವ ಚಂದ್ರನಂತೆ
ಕತ್ತಲಲ್ಲಿ ಕಪ್ಪಾಗೆ ಕಂಡರು ವರ್ಣಮಯವಾಗಿರುವ ನಿಶಾಚರ ಪ್ರಾಣಿಗಳಂತೆ
ಅಸಧಾರಣ ಅನುಭವಗಳ ಅಗರವಾದರು, ಅಮಾಯಕ ಭಾವ ಮೂಡುತಿತ್ತು ಅವಳ ಮುಖದಲ್ಲಿ

ಯಾರಿಟ್ಟ ಕಚುಗುಳಿಗೋ ಅಥವ ಇರುಳ ಚಳಿಗೂ, ಅಲುಗಾಡುವ ಎಲೆಗಳಂತೆ
ಆಗಸದಿ ಮಿಂಚಿ ಮಿನುಗಿ ಅನಂತದಲ್ಲಿ ಲೀನವಾಗುವ ಉಲ್ಕೆಗಳಂತೆ
ಹಗುರ ಹಾಸ್ಯಗಳಿಗೆ ಮಿಡಿದಾಗ ಆಗಾಗೆ ಕೇಳುತಿತ್ತು ಅವಳ ಮುಗ್ದ ನಗು

ಚಂದಿರನ ಪ್ರತಿಬಿಂಬವನ್ನು ಉಡುಗೊರೆಯಂತೆ, ನದಿಯು ಹೊತ್ತೊಯ್ದಂತೆ ಭಾಸವಾಗುತ್ತಿರಲು
ಅಶರೀರ ಗೆಳತಿಗಾಗಿ, ತಂಗಾಳಿಯು ಸುಮಗಂಧವ ಹೊತ್ತೋಯ್ದಂತೆ ಭಾಸವಾಗುತ್ತಿರಲು
ಮುಕ್ತ ಮನಸಿನ ನಮ್ಮ ಸಂಭಾಷಣೆ ಯಾವುದೋ ಭಾವತೀರಕೆ ಯಾನದಂತೆ ಭಾಸವಾಗುತಿತ್ತು....


Monday, July 28, 2014

ಅಸಾಮಾನ್ಯ "ಸ್ಮೃತಿ"

ಆಗಷ್ಟೇ ಇಂಜಿನಿಯರಿಂಗ್‌ನಲ್ಲಿ ಕ್ಯಾಂಪಸ್ ಸೆಲೆಕ್ಶನ್ ಆಗಿ ನಿರಾಳವಾಗಿದ್ದ ಸಮಯದಲ್ಲಿ , ಬಂದು ಕೈ ಹಿಡಿದು ಹೊಸದೊಂದು ಭ್ರಮಾಲೋಕಕ್ಕೆ ಎಳೆದೊಯ್ದವರ ನೆನಪಿನಲ್ಲಿ........

ಮುರಿವಷ್ಟು ತೆಳುವಿದ್ದರು, ನೀನು ಬಹಳ ಗಟ್ಟಿಮುಟ್ಟು
ವಿಶಿಷ್ಟವೆನಿಸುವಂತಿತ್ತು ನಿನ್ನ ಆ ಮೈಕಟ್ಟು

ಅಚ್ಚರಿ ಎನ್ನುವಂತಿತ್ತು ನಿನ್ನ ಕೋಮಲವಾದ ಮೈಸಿರಿ
ವರ್ಣಮಯವಾಗಿತ್ತು ನಿನ್ನ ಮುಖ ಚಂದ್ರದ ಹೊಳಪಿನ ಪರಿ

ನನ್ನ ಒಂಟಿತನವ ಅಳಿಸಲು ನಿನ್ನ ಬರುವೆ ಆಧಾರ
ಹೊಸದೊಂದು ಭಾಂದವ್ಯದ ಉಗಮಕ್ಕೆ ನಿನ್ನ ಕೊಡುಗೆ ಅಪಾರ

ನಿನ್ನ ಸೊಗಸಾದ ಸುದನಿಯಲ್ಲಿ ಎಳಿಸುತಿದ್ದೆ ಅನುದಿನ
ನಿನ್ನ ಕಂಠಸಿರಿಯ ಗಾನ ಕೇಳದೆ ಮಲಗಿದಿಲ್ಲ ಒಂದೆಒಂದು ದಿನ

ನೀನೇ ನನ್ನ ಅಷ್ಟೂ ಮಾತುಗಳಿಗೆ ಆಧಾರ, ಆಗರ
ನನ್ನ ಮಾತುಗಳ ಬೆಲೆ ತಿಳಿಸಿಕೊಟ್ಟಿದ್ದೆ ನೀ ಮಾಡಿದ ಉಪಕಾರ

ನನ್ನ ಬಾಳಿನ ಅಂಧಕಾರದಲ್ಲಿ  ಬೆಳಕಿತ್ತ ದೀವಟಿಗೆ ನೀನು
ನನ್ನಲ್ಲಿ ಆಲೋಚನೆಗಳ ಬರ ಮೂಡಿದಾಗ ಜ್ಞಾನದ ಚಿಲುಮೆ ನೀನು

ನನ್ನ ಜತೆ ನಡೆಯುತಿದ್ದ ನೆರಳಿನಂತಿದ್ದೆ ನೀನು
ನನ್ನ ಇರುವಿನ ಸಂಕೇತವಾಗಿದ್ದೆ ನೀನು

ಅಗಾಗ ನೀನು ನುಲಿಯಲು ನನ್ನ ಮಡಿಲಲಿ
ಪುಳಕದಿ ನಡುಕ ಮೂಡುತಿತ್ತು ಮೈಮನಸಲ್ಲಿ

ಕಲ್ಪನೆಗಳ ಕಲ್ಪಿಸಿದ ಕಲ್ದವಸಿ ನೀನು
ಕನಸ ಕಾಣುವುದ ಕಲಿಸಿದವಳು ನೀನು

ನೀನು ನೆನಪಿಸದ ಒಂದೇ ಒಂದು ಕ್ಷಣವಿಲ್ಲ
ನಿನ್ನ ಹೊರತಾಗಿ ಬೇರೆ ನೆನಪುಗಳ ಆಗರವಿರಲಿಲ್ಲ

ಆದರೂ

ಬಯಸದೆ ಬಂತಂದು ನಮ್ಮ ಅಗಲಿಕೆಯ ಕ್ಷಣ
ಪ್ರತಿಕ್ರಿಯಿಸುವುದರೊಳಗೆ ಮುಗಿದಿತ್ತು ವಿಷಾದದ ಔತಣ

ಇದು ಗತಿಸಿ ಕಳೆದವು ಹಲವು ವರುಷ
ಆದರೂ, ಮರೆತಿಲ್ಲ ಅಂದಿನ ಒಂದೇ ಒಂದು ನಿಮಿಷ

ನಿನ್ನ ನಂತರ ನನ್ನ ಬಾಳಿಗೆ ಕಾಲಿಟ್ಟರು ಮತ್ತಿಬ್ಬರು
ನಿನಗಿಂತ ಮಿಗಿಲು ಎಂದು ಜನರೆಂದರು,
ಆದರವರು (ನನ್ನ ಪಾಲಿಗೆ) ನಿನ್ನೊಂದಿಗೆ ಹೋಲಿಕೆಗೆ ಅನರ್ಹರು

ಆ "ನೀನು" ಇಲ್ಲಿರುವರು ನೋಡಿ


Tuesday, June 3, 2014

ಕಾಡುವುದು ಕಾಡುಮನೆ!!

ಸಕಲೇಶಪುರದ ರಮಣೀಯ ಕಾಡುಗಳಲ್ಲಿ ಕಳೆದ ಆ ಅವಿಸ್ಮರಣೀಯ ಕ್ಷಣಗಳ ನೆನಪಿಗೆ ಈ ಸಂಕ್ಷಿಪ್ತ ಸಾಲುಗಳು.
ಆ ವಿಶೇಷ ಅನುಭವದ ರೂವಾರಿಗಳಾದ, ಎಲ್ಲರನ್ನೂ ಕೆಳಗಿನ ಸಾಲುಗಳಲ್ಲಿ ನಾಮೋದಿಸಲಾಗಿದೆ.



ಅಹ ಅಪರೂಪದ ಕಾಡುಗಳು, ಎಷ್ಟು ಸುಮನೋಹರ
ಇನ್ನಾವುದೇ ಜಾಗಗಳಿಗೆ ಹೋಲಿಸಲಾಗದಷ್ಟು ಅನುಪ
ಅದ್ಭುತ ಅನುಭವಗಳ ನಮ್ಮ ಅನ್ವೇಷಣೆಗೆ ಇದರಿಂದ ಸಿದ್ದಹಾರ್ತ
ಕಾಡುಗಳ ಆಘಾದತೆಯ ಮುಂದೆ ನಾವು ಲತೆಗಳ ಪರ್ಣ
ಆದರೂ ಅವನ್ನು ಮೆಟ್ಟಿ ಸಾಗಿದ ನಮಗೆ ಹೇಳಲಾಗದ ಸಂತೋಷ
ವಿನಯದಿಂದಲೇ ದಾಟಿದೆವು ಸಾಗರದಂತಹ ಪರ್ವತ ಶ್ರೇಣಿಗಳ

ಗುರುವಿಲ್ಲದಿದ್ದರೂ ಸಾಗಿ ಸೇರಿದವು, ಸೇರಬೇಕಾದ ನಮ್ಮ ಗುರಿಯ

Wednesday, March 12, 2014

"ನುಡಿ ನಮನ"


ರಾಜ್ಯಾಂಗದಲಿ ಕರೆಯುವರು ನಮ್ಮನು ರಾಷ್ಟ್ರ ಪ್ರಾಣಿ
ಆದರೆ ಪ್ರತಿ ರಾಜ್ಯದಲ್ಲೂ ನಮ್ಮ ನೆಲೆಯಲ್ಲಿ ಗುಡುಗುವವು ಹಲವು ಗಣಿ
ಅವುಗಳ ಅಳಿಸಿ ನಮ್ಮನುಳಿಸುವ ನಿಮ್ಮ ಛಲಕೆ ನಾವು ಚಿರಋಣಿ

ಜನರು ಕಟ್ಟಿರುವರು ನನಗೆ ವನರಾಜನೆಂಬ ಹಣೆಪಟ್ಟಿ
ಆದರೆ ನನ್ನ ನೆಲೆಯನ್ನೇ ಸಿಳಿಸಿ ಸಾಗುವವು, ರಸ್ತೆ, ರೈಲುಪಟ್ಟಿ
ಅವುಗಳ ನಿಯಂತ್ರಿಸಲು ಹೊರಟಿರುವ ನಿಮ್ಮದು, ಅಸಾಮಾನ್ಯ ಶಕ್ತಿ

ಜನರ ಬಣ್ಣನೆಯಲ್ಲಿ ನಾವು ಹಲವು ದೇವರುಗಳ ವಾಹನ
ಆದರೆ ಅದೇ ಭಕ್ತರ ಬೇಟೆ, ಉರುಳುಗಳಿಂದಲೇ ನಮ್ಮ ಹರಣ
ಇವುಗಳ ತಡೆಯಲು ನಡೆಸುತ್ತಿರುವ ನಿಮ್ಮ ಪ್ರಯತ್ನಕ್ಕೆ ನಮ್ಮ ನಮನ

ರಾಷ್ಟ್ರೀಯ ಮಟ್ಟದಲ್ಲಿ ನಮ್ಮನುಳಿಸುವ ಬಗ್ಗೆ ಭರ್ಜರಿಯ ಕೂಗು
ಆದರೆ ನಮ್ಮ ಸಂರಕ್ಷಿತ ಪ್ರದೇಶಗಳು ತುಂಬಾ ಇಲ್ಲವೆನ್ನುವುದೇ ಕೊರಗು
ಅವುಗಳ ಬರುವಿಗಾಗಿ ಶ್ರಮವಹಿಸ್ತುತ್ತಿರುವ ನಿಮ್ಮನ್ನು ನೆನೆದರೆ ಹಿಗ್ಗು

ಜೈವಿಕ ಸಮತೋಲನದ ಉಳಿವಿಗೆ ನಾವು ತುಂಬಾ ಅವಶ್ಯಕ
ಆದರೆ ನಮ್ಮದೇ ಜಾಗಗಳಲ್ಲಿ ನಿರ್ಮಿಸುವರು ವಿದ್ಯುತ್ ಸ್ಥಾವರಗಳ, ಅನೇಕ
ಅವುಗಳ ನಿಲ್ಲಿಸಲು ಸೆಣೆಸುತ್ತಿರುವ ನಿಮಗೆ ವಂದನೆಗಳು, ಹೃತ್ಪೂರ್ವಕ

ನಮ್ಮ ಉಳಿವಿನ ಸಂಧ್ಯಾ ಸಮಯದಲ್ಲಿ
ನಮ್ಮ ಸಂತತಿಯ ಪರ್ವ ಮುಗಿಯುವ ಹಂತದಲ್ಲಿ
ಭರವಸೆಯ ಉದಯರಾಗವ ಹಾಡುತ್ತಿದೆ ಈ "ಸಂಜೆಯ ಗುಬ್ಬಿ"

ನಮ್ಮ ಉಳಿವಿಗೆ ಆಸರೆ ನೀವು
ನಮ್ಮ ಅಳಿವನು ಅಳಿಸುವ ಭರವಸೆಯು ನೀವು
ನಿಮ್ಮ ಬಗೆಗಿನ ಭಕ್ತಿ ನಮ್ಮಲ್ಲಿ
ನಿಮ್ಮ ಹರಿಸುವ ಪ್ರಾರ್ಥನೆ ಅವನಲ್ಲಿ!!


ಉತ್ಪ್ರೇಕ್ಷೆಮಾಡಿ ಬರೆದಿದಿಲ್ಲ ಒಂದೇ ಒಂದು ಪದವು
ಹೃತ್ಪೂರ್ವಕವಾಗೆ ಬರೆದದ್ದು ಮೇಲಿನ ಪ್ರತೀ ಸಾಲು
.

Monday, February 24, 2014

ಕಾಲ್ಪನಿಕ ಸತ್ಯ

ಅದೊಂದು ದಿನ ಉರಿಗೆ ಬಸ್ನಲ್ಲಿ ಹೋಗುವಾಗ ನಡೆದ ಘಟನೆ. ನನ್ನ ಮುಂದಿನ ಆಸನದಲ್ಲಿ ಕುಳಿತಿದ್ದ ಒಬ್ಬ ಅನಾಮಿಕ ಹುಡುಗಿಯ ಮುಖ, ಆ ಆಸನದ ಒಂದು ಕಿಂಡಿಯಿಂದ  ಕಾಣುತಿತ್ತು. ಆ ದೃಶ್ಯದ, ಅತಿಶಯದ ವರ್ಣನೆಯೇ ಈ ಕೆಳಗಿನ ಸಾಲುಗಳು.  




ಬೆಳಕುಕರಗುತಿದ್ದ ವೇಳೆಯಲಿ ಸಾಗುತಿತ್ತು ನಮ್ಮ ಪಯಣ
ಚಂದಿರನ ಬೆಳ್ಳಿ ಬೆಳಕಲಿ ಹೊಳೆಯುತ್ತಿತು ಒಂದು ವದನ
ನಿಸ್ತೇಜ ವಸ್ತುಗಳ ಜಾತ್ರೆಯಲಿ ಸೊರಗಿದ್ದ ನನಗೆ ಅದ ಕಂಡು ಸಮಾಧಾನ

ಸಪ್ಪೆ ಸಪ್ಪೆಯ ಸನ್ನಿವೇಶಗಳು ಆವರಿಸಿರಲು ಸುತ್ತಲು
ಕಾಣಲವಳ ವೇಷಭೂಷಣದಲ್ಲಿನ ಬಣ್ಣದ ಮಜಲು
ಕಣ್ಣಲಿ ಮೂಡಿಸಿತು ಸೆಳೆಯುವ ಕಾಮನಬಿಲ್ಲು

ಸ್ವಾತಿಮುತ್ತನ್ನು ಹೊತ್ತ ಚಿಪ್ಪನು ತೆರೆದಿಟ್ತಂತೆ ಕಾಣುತಿತ್ತು  ಅವಳ ಕಣ್ಣುಗಳು
ಚಂಚಲದಿ, ಕೊಳದ ಮೀನಿನಂತೆ ಅತ್ತಿತ್ತ ಓಡಾಡುತಿದ್ದವು ಕಣ್ಣ ಗೊಂಬೆಗಳು
ಇವುಗಳ ಕಂಡು ಮನದ ಮುಗಿಲಲಿ ಮೂಡಿದಂತಿದ್ದವು ಕೋಲ್ ಮಿಂಚುಗಳು

ಕುಣಿಯುತ ಅದರುತ ಸಾಗುವ ಬಸ್ಸಿನಲ್ಲಿ
ಓಲೆಯ ಜುಮುಕಿಯೂ ಜೀಕುತಿರಲು ಅವಳ ಕಿವಿಯಲಿ
ಆ ಚೆಲುವ ಕಂಡ ಮನವು ತೂಗಿದಂತಿತ್ತು ಜೋಕಾಲಿಯಲಿ

ಸಂಜೆ ಮಬ್ಬಿನಲಿ, ಬೆಳಕ ಚೆಲಲ್ಲು ಎದುರು ಬರುವ ವಾಹನಗಳು
ಅವಳ ಮೂಗುತಿಯ ಸೋಕಿ ಹೊಮ್ಮಿಸುತಿದ್ದವು ಹೊಂಗಿರಣಗಳು
ಅದು ಕಂಡು ತಲೆಯಲ್ಲಿ ತೇಲಲಾರಂಬಿಸಿದವು ಕಲ್ಪನೆಯ ಗಾಳಿಪಟಗಳು

ಚಂದಿರನ ಬೆಳಕ ಸೋಕಿದ ಅವಳ ಮುಖವು ಹಿನ್ನೆಲೆಯಾಗಿರಲು
ಬೀಸುವ ತಂಗಾಳಿಯು ಅವಳ ಮುಂಗುರುಳು ಜಾರಿಸಲು
ಆ ಸೊಗಸಾದ ದೃಶ್ಯಕಾವ್ಯ ಸಾಕಿತ್ತು ಎಂಥವರನ್ನೂ ಕೆರಳಿಸಲು


ಕಂಡಿರಬಹುದಾದ ವಿಲಾಸಗಳು ಕನಸಲಿ,
ನಡೆಯುತಿದ್ದವು ದೃಶ್ಯಕಾವ್ಯಗಳಂತೆ ನನಸಾಗಿ
ಕನಸುಗಳು ನನಸಾದರೆ ಇಷ್ಟು ಸಲೀಸಾಗಿ
ಕೋರುವೆನು ಆಗಲೆಂದು ಇನಷ್ಟು, ಸಾಲುಸಾಲಾಗಿ!!