Life Goes On...

Life Goes On...
Life--- The way u Look at it

Monday, February 24, 2014

ಕಾಲ್ಪನಿಕ ಸತ್ಯ

ಅದೊಂದು ದಿನ ಉರಿಗೆ ಬಸ್ನಲ್ಲಿ ಹೋಗುವಾಗ ನಡೆದ ಘಟನೆ. ನನ್ನ ಮುಂದಿನ ಆಸನದಲ್ಲಿ ಕುಳಿತಿದ್ದ ಒಬ್ಬ ಅನಾಮಿಕ ಹುಡುಗಿಯ ಮುಖ, ಆ ಆಸನದ ಒಂದು ಕಿಂಡಿಯಿಂದ  ಕಾಣುತಿತ್ತು. ಆ ದೃಶ್ಯದ, ಅತಿಶಯದ ವರ್ಣನೆಯೇ ಈ ಕೆಳಗಿನ ಸಾಲುಗಳು.  




ಬೆಳಕುಕರಗುತಿದ್ದ ವೇಳೆಯಲಿ ಸಾಗುತಿತ್ತು ನಮ್ಮ ಪಯಣ
ಚಂದಿರನ ಬೆಳ್ಳಿ ಬೆಳಕಲಿ ಹೊಳೆಯುತ್ತಿತು ಒಂದು ವದನ
ನಿಸ್ತೇಜ ವಸ್ತುಗಳ ಜಾತ್ರೆಯಲಿ ಸೊರಗಿದ್ದ ನನಗೆ ಅದ ಕಂಡು ಸಮಾಧಾನ

ಸಪ್ಪೆ ಸಪ್ಪೆಯ ಸನ್ನಿವೇಶಗಳು ಆವರಿಸಿರಲು ಸುತ್ತಲು
ಕಾಣಲವಳ ವೇಷಭೂಷಣದಲ್ಲಿನ ಬಣ್ಣದ ಮಜಲು
ಕಣ್ಣಲಿ ಮೂಡಿಸಿತು ಸೆಳೆಯುವ ಕಾಮನಬಿಲ್ಲು

ಸ್ವಾತಿಮುತ್ತನ್ನು ಹೊತ್ತ ಚಿಪ್ಪನು ತೆರೆದಿಟ್ತಂತೆ ಕಾಣುತಿತ್ತು  ಅವಳ ಕಣ್ಣುಗಳು
ಚಂಚಲದಿ, ಕೊಳದ ಮೀನಿನಂತೆ ಅತ್ತಿತ್ತ ಓಡಾಡುತಿದ್ದವು ಕಣ್ಣ ಗೊಂಬೆಗಳು
ಇವುಗಳ ಕಂಡು ಮನದ ಮುಗಿಲಲಿ ಮೂಡಿದಂತಿದ್ದವು ಕೋಲ್ ಮಿಂಚುಗಳು

ಕುಣಿಯುತ ಅದರುತ ಸಾಗುವ ಬಸ್ಸಿನಲ್ಲಿ
ಓಲೆಯ ಜುಮುಕಿಯೂ ಜೀಕುತಿರಲು ಅವಳ ಕಿವಿಯಲಿ
ಆ ಚೆಲುವ ಕಂಡ ಮನವು ತೂಗಿದಂತಿತ್ತು ಜೋಕಾಲಿಯಲಿ

ಸಂಜೆ ಮಬ್ಬಿನಲಿ, ಬೆಳಕ ಚೆಲಲ್ಲು ಎದುರು ಬರುವ ವಾಹನಗಳು
ಅವಳ ಮೂಗುತಿಯ ಸೋಕಿ ಹೊಮ್ಮಿಸುತಿದ್ದವು ಹೊಂಗಿರಣಗಳು
ಅದು ಕಂಡು ತಲೆಯಲ್ಲಿ ತೇಲಲಾರಂಬಿಸಿದವು ಕಲ್ಪನೆಯ ಗಾಳಿಪಟಗಳು

ಚಂದಿರನ ಬೆಳಕ ಸೋಕಿದ ಅವಳ ಮುಖವು ಹಿನ್ನೆಲೆಯಾಗಿರಲು
ಬೀಸುವ ತಂಗಾಳಿಯು ಅವಳ ಮುಂಗುರುಳು ಜಾರಿಸಲು
ಆ ಸೊಗಸಾದ ದೃಶ್ಯಕಾವ್ಯ ಸಾಕಿತ್ತು ಎಂಥವರನ್ನೂ ಕೆರಳಿಸಲು


ಕಂಡಿರಬಹುದಾದ ವಿಲಾಸಗಳು ಕನಸಲಿ,
ನಡೆಯುತಿದ್ದವು ದೃಶ್ಯಕಾವ್ಯಗಳಂತೆ ನನಸಾಗಿ
ಕನಸುಗಳು ನನಸಾದರೆ ಇಷ್ಟು ಸಲೀಸಾಗಿ
ಕೋರುವೆನು ಆಗಲೆಂದು ಇನಷ್ಟು, ಸಾಲುಸಾಲಾಗಿ!!