ತಿಳಿನೀಲಾಕಾಶವು ಕಪ್ಪಾಗಿ ತಯಾರಿರಲು ಇರುಳ ಅಚ್ಚರಿಗೆ
ದಿನಚರಿಯ ಮುಗಿಸಿ ಮಲಗಿರುವನು ಆ ರವಿಯು ಬೆಚ್ಚಗೆ
ಬಾಲ ಚಂದಿರನು ವಿರಾಜಿಸುತ್ತಿದ್ದನು ನಭದಲ್ಲಿ, ಮಾದರಿಯಾಗಿ ಚೆಲುವಿಗೆ
ಆ ನೀರವದ ಆತಂಕವ ಅಳಿಸಲು ತಂಗಾಳಿ ಆಲಾಪಿಸುತಿತ್ತು
ಕಡಲ ಸೇರುವ ಕಾತರದಲ್ಲಿ ಆ ನೀರ ಹನಿಗಳು ಕಾಲಕಿತ್ತಿದ್ದವು
ಅಗೋಚರ ಜೀವ ಕೋಟಿಯ ಅಸಂಬದ್ದ ಸಂವಾದದಲ್ಲಿ ತಲ್ಲೀನವಾಗಿತ್ತು
ಈ ಸುಂದರ ಸನ್ನಿವೇಶ ಮೂಡಿರಲು
ನದಿಯ ಪಕ್ಕದಲ್ಲಿ ನಾವು ಸಂಭಾಷಣಿಯಲ್ಲಿ ಮುಳುಗಿರಲು
ಆಗಾಗ ಕಂಡ ಅಚ್ಚರಿಗಳ ಬುತ್ತಿಯೇ ಈ ಕೆಳಗಿನ ಸಾಲುಗಳು
ಚಂದಿರನ ಮೀರಿಸುವಂತಿತ್ತು ಆ ಅಸಂಖ್ಯ ಚುಕ್ಕಿಗಳ ಹೊಳಪು
ನಾವೇನು ಕಮ್ಮಿ ಎನ್ನುವಂತಿತ್ತು ಮಿಂಚುಳ್ಳಿಗಳ ಮಿಂಚಿನ ಸೊಗಸು
ಆದರೆ ಅವುಗಳ ನಾಚಿಸುವಂತಿತ್ತು ಆಗಾಗ ಮಿಟುಕಿಸಲು ಅವಳ ಕಣ್ಣು
ಹಧ ಮೀರದೆ ತಂಗಾಳಿಯೊಟ್ಟಿಗೆ ತೂಗುತ್ತಿರುವ ಬಳಕುವ ಬಳ್ಳಿಗಳಂತೆ
ಮಧ ತೋರದೆ, ಇರುಳ ವಿಸ್ಮಯವ ತೋರಿಸುತ್ತಿರುವ ಆ ಮೋಡಗಳಂತೆ
ಸಂಭಾಷಣೆಯ ಲಯಕ್ಕೆ ತರುತಿದ್ದವು ಅವಳ ಸ್ಪುಟವಾದ ಮಾತುಗಳು
ಮೀನುಗಳು ಜಿಗಿದು ಮತ್ತೆ ನೀರಿಗೆ ಬಿದ್ದು, ಮೂಡಿಸುವ ಕ್ಷಣಿಕ ಗದ್ದಲದಂತೆ
ಕಲ್ಲು ಅಡ್ಡಾಗಿ ತಿಳಿನೀರ ಹರಿವಿನಲ್ಲಿ ಮೂಡುವ ಸ್ಠಾನಿಕ ಗಲಭೆಯಂತೆ
ಆಗಾಗ ಸಿಡಿದು ಓಮ್ಮೆಲೆ ತಣ್ಣಗಾಗುತಿತ್ತು ಅವಳ ಆ ತುಸು ಮುನಿಸು
ವಿಶಿಷ್ಟ ಕೆಲಸವಲ್ಲದಿದ್ದರು ಬಂದಂದು ಮುದ್ದು ಮುಖವ ತೋರುವ ಚಂದ್ರನಂತೆ
ಕತ್ತಲಲ್ಲಿ ಕಪ್ಪಾಗೆ ಕಂಡರು ವರ್ಣಮಯವಾಗಿರುವ ನಿಶಾಚರ ಪ್ರಾಣಿಗಳಂತೆ
ಅಸಧಾರಣ ಅನುಭವಗಳ ಅಗರವಾದರು, ಅಮಾಯಕ ಭಾವ ಮೂಡುತಿತ್ತು ಅವಳ ಮುಖದಲ್ಲಿ
ಯಾರಿಟ್ಟ ಕಚುಗುಳಿಗೋ ಅಥವ ಇರುಳ ಚಳಿಗೂ, ಅಲುಗಾಡುವ ಎಲೆಗಳಂತೆ
ಆಗಸದಿ ಮಿಂಚಿ ಮಿನುಗಿ ಅನಂತದಲ್ಲಿ ಲೀನವಾಗುವ ಉಲ್ಕೆಗಳಂತೆ
ಹಗುರ ಹಾಸ್ಯಗಳಿಗೆ ಮಿಡಿದಾಗ ಆಗಾಗೆ ಕೇಳುತಿತ್ತು ಅವಳ ಮುಗ್ದ ನಗು
ಚಂದಿರನ ಪ್ರತಿಬಿಂಬವನ್ನು ಉಡುಗೊರೆಯಂತೆ, ನದಿಯು ಹೊತ್ತೊಯ್ದಂತೆ ಭಾಸವಾಗುತ್ತಿರಲು
ಅಶರೀರ ಗೆಳತಿಗಾಗಿ, ತಂಗಾಳಿಯು ಸುಮಗಂಧವ ಹೊತ್ತೋಯ್ದಂತೆ ಭಾಸವಾಗುತ್ತಿರಲು
ಮುಕ್ತ ಮನಸಿನ ನಮ್ಮ ಸಂಭಾಷಣೆ ಯಾವುದೋ ಭಾವತೀರಕೆ ಯಾನದಂತೆ ಭಾಸವಾಗುತಿತ್ತು....
No comments:
Post a Comment